Sunday, August 22, 2021

ಪಾರಿವಾಳ ನಕ್ಕಿತು..

 ಒಂದು ಪಾರಿವಾಳದ ಗುಂಪು ಮಸೀದಿ ಮೇಲೆ ಗೂಡು ಕಟ್ಟಿಕೊಂಡು ವಾಸವಾಗಿದ್ದವು. ರಂಜಾನ್ ಬಂತು, ಮಸೀದಿಗೆ ಸುಣ್ಣಬಣ್ಣ ಬಳಿಯಲು ಎಲ್ಲಾ ಸ್ವಚ್ಛಗೊಳಿಸತೊಡಗಿದರು. ಆಗ ಆ ಪಾರಿವಾಳಗಳು ಅಲ್ಲಿಂದ ಹಿಂದೂ ದೇವಾಲಯಕ್ಕೆ ಹೋಗಿ ವಾಸವಾದವು. ಕೆಲದಿನಗಳಲ್ಲಿ ದಸರಾ ಹಬ್ಬ ಬಂತು. ಅಲ್ಲಿಂದ ಪಾರಿವಾಳಗಳು ಹಾರಿ ಚರ್ಚ್ ಮೇಲೆ ನೆಲೆಸಿದವು. ಕ್ರಿಸ್'ಮಸ್ ವೇಳೆಗೆ ಮತ್ತೆ ಮಸೀದಿಗೆ ನೆಲೆ ಬದಲಾಯಿಸಿದವು. 


ಒಂದು ದಿನ ಮಸೀದಿ ಮುಂದೆ ಕೋಮುಗಲಭೆ ನಡೆಯಿತು. ಆಗ ಅದನ್ನು ನೋಡಿದ ಮರಿ ಪಾರಿವಾಳ ತಾಯಿ ಪರಿವಾಳವನ್ನು ಕೇಳಿತು.... 

'ಯಾರು ಅವರು ಬಡಿದುಕೊಳ್ಳುತ್ತಿರುವುದು'.

ತಾಯಿ ಪಾರಿವಾಳ ಹೇಳಿತು...

'ಅವರು ಮನುಷ್ಯರು' ಮಗು.

ಯಾಕೆ ಅವರು ಜಗಳವಾಡುತ್ತಿದ್ದಾರೆ...

'ಮಸೀದಿಗೆ ಹೋಗುವವರು ಮುಸ್ಲಿಮರು'

'ಗುಡಿಗೆ ಹೋಗುವವರು ಹಿಂದುಗಳು'

'ಚರ್ಚ್'ಗೆ ಹೋಗುವವರು ಕ್ರೈಸ್ತರು'

ಇದು ಹಿಂದು ಮುಸ್ಲಿಮರ ಘರ್ಷಣೆ.


ಮರಿ ಪಾರಿವಾಳಕ್ಕೆ ಆಚ್ಚರ್ಯವಾಯಿತು.

'ನಾವು ಕೂಡ ಮಸೀದಿಗೆ, ಗುಡಿಗೆ, ಚರ್ಚ್'ಗೆ ತಿರುಗಿದ್ದೆವು ಅಲ್ಲವೇ...! 

ನಾವು ಎಲ್ಲಿಗೆ ಹೋದರೂ ಪಾರಿವಾಳಗಳೇ.

ಮತ್ತೆ ಅವರು ಮನುಷ್ಯರು ಎಲ್ಲಿಗೆ ಹೋದರೂ ಮನುಷ್ಯರೇ ಅಲ್ಲವೇ...!


ತಾಯಿ ಪಾರಿವಾಳ ನಕ್ಕಿತು....

"ನಾವು ಅವರಿಗಿಂತ ಎತ್ತರದಲ್ಲಿದ್ದೆವೆ. ವಿಶಾಲವಾದ ಪ್ರಪಂಚ ನಮ್ಮದು. ಸ್ವೇಚ್ಛಾ ಜಗತ್ತು ನಮ್ಮದು. ಎಲ್ಲಾ ಜೀವಿಗಳಲ್ಲಿ ಮೇಧಾವಿಯಾದ ಮಾನವ ಕುಲ, ಮತ, ಜಾತಿ, ಲಿಂಗ, ವರ್ಗ ಗೋಡೆಗಳನ್ನು ನಿರ್ಮಿಸಿಕೊಂಡಿದ್ದಾನೆ. ಎಲ್ಲವನ್ನೂ ಬಿಟ್ಟರೆ ಮಾತ್ರ ಅವರು ನಮ್ಮ 'ಎತ್ತರ'ಕ್ಕೆ ಬರುತ್ತಾರೆ.

ಈ ಘರ್ಷಣೆಗಳು ಅಂತ್ಯವಾಗುತ್ತವೆ". ಎನ್ನುತ್ತಾ ಪೂರ್ವದಿಕ್ಕಿನಲ್ಲಿ ವಿಹಂಗಮವಾಗಿ ಹಾರುತ್ತಿರುವ ಮತ್ತೊಂದು ಪಾರಿವಾಳದ ಗುಂಪನ್ನು ನೋಡುತ್ತಾ ಹೇಳಿತು.


ಕನ್ನಡನಾಡಿನ ಕಥೆಗಾರ ಅಬ್ದುಲ್ ರಶೀದ್ ಬರೆಯುತ್ತಾರೆ ಹೀಗೆ. ಓದಿ ನೋಡಿ

 ಕನ್ನಡನಾಡಿನ ಕಥೆಗಾರ ಅಬ್ದುಲ್ ರಶೀದ್ ಬರೆಯುತ್ತಾರೆ ಹೀಗೆ


ನಾನು ತಾಲಿಬಾನನ್ನು ವಿರೋಧಿಸಿ ಬರೆದಾಗಲೆಲ್ಲ ಕನ್ನಡದಲ್ಲಿ ಬರೆಯುವ ಕೆಲವು ಮುಸಲ್ಮಾನ ಲೇಖಕರು, ಪತ್ರಕರ್ತ ಸ್ನೇಹಿತರು (ಅದರಲ್ಲೂ ಹೆಚ್ಚಾಗಿ ಕರಾವಳಿ ಮೂಲದ ಬ್ಯಾರಿ ಭಾಷಿಕರಾದ ಕನ್ನಡದ ಬರಹಗಾರರು),  ನೀವು ಯಾಕೆ ನಮ್ಮಲ್ಲಿರುವ ಹಿಂದೂ ಕೋಮುವಾದದ  ಕುರಿತು, ಅಸಹಿಷ್ಣುತೆಯ ಕುರಿತು, ಇಲ್ಲಿ ದಲಿತ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ಕುರಿತು ಬರೆಯುವುದಿಲ್ಲ ಎಂದು ಪ್ರಶ್ನಿಸುತ್ತಾರೆ. 

ನಿಮ್ಮದು ಬಹುಸಂಖ್ಯಾತರನ್ನು ಮತ್ತು ಸರಕಾರಗಳನ್ನು ತುಷ್ಟೀಕರಿಸುವ ಜಾಣತನ ಎಂದೂ ಆರೋಪಿಸುತ್ತಾರೆ. 

ಇನ್ನು ಕೆಲವರು ಇನ್ನೂ ಮುಂದಕ್ಕೆ ಹೋಗಿ ಇವನು ಬ್ಯಾರಿಯಲ್ಲ, ಬ್ರಾಹ್ಮಣ ಎಂದೂ ಮೂದಲಿಸುತ್ತಾರೆ. 

ಇವನು ಯಾಕೆ ಲಕ್ಷದ್ವೀಪದಲ್ಲಿ ನಡೆಯುತ್ತಿರುವ ಅನ್ಯಾಯಗಳ ಕುರಿತು ಬರೆಯುವುದಿಲ್ಲ, ಯಾಕೆ ದೂರದಲ್ಲಿರುವ ತಾಲಿಬಾನಿಗಳ ಬಗ್ಗೆ ದೂರುತ್ತಾನೆ ಎಂದೂ ಹಳಿಯುತ್ತಾರೆ. 

ನಾನು ಹಿಂದೆ ತಬ್ಲೀಗಿಗಳ ಬಗ್ಗೆ ಬರೆದಾಗಲೂ ಇದೇ ತರಹದ ಮೂದಲಿಕೆಗಳನ್ನು ಆನಂದಿಸಿದ್ದೆ.


ಆದರೆ ವಿಷಯ ಈ ಮೂದಲಿಕೆಗಳಿಗಿಂತ ಗಂಭೀರವಾಗಿದೆ  ಮತ್ತು ಇಂತಹ ಮೂದಲಿಕೆಗಳನ್ನು ಆನಂದಿಸುವ ಕಾಲ ಮುಗಿದಿದೆ ಮತ್ತು ಈ ಸ್ನೇಹಿತರಂತವರ ನಿಲುವುಗಳು ಹೇಗೆ ನಿಧಾನಕ್ಕೆ ಭಾರತದ ನೆಲಕ್ಕೆ ವಿಷಕಾರಿಯಾಗಲಿವೆ ಎಂದು ಹೇಳಬೇಕಾದ ಕಾಲ ಬಂದಿದೆ. 

ತಾಲಿಬಾನಿಗಳ ವಿರುದ್ಧ ಮಾತನಾಡಿದಾಗಲೆಲ್ಲ ನಿಮ್ಮಂತಹ ಪ್ರಗತಿಪರ ಅಂತ ಅಂದುಕೊಂಡಿರುವ ಬುದ್ದಿಜೀವಿಗಳು ಇಲ್ಲಿಯ ಕೋಮುವಾದ, ಜಾತೀಯತೆ, ಅಸ್ಪ್ರಶ್ಯತೆಗಳ ಮೊರೆಹೋಗುವುದರ ಹಿಂದೆ ಎಲ್ಲೋ ಒಂದು ಕಡೆ ಇಲ್ಲಿಯ ಕೋಮುವಾದಿಗಳು ಮಾಡುತ್ತಿರುವುದು ಸರಿ ಎನ್ನುವುದಾದರೆ ಅಲ್ಲಿಯ ತಾಲಿಬಾನಿಗಳು ಮಾಡುತ್ತಿರುವುದೂ ಸರಿ ಇದೆ ಎಂಬ ಧ್ವನಿ ಕೇಳಿಸುತ್ತದೆ. 

ಇಲ್ಲಿ ನಡೆಯುತ್ತಿರುವುದನ್ನು ಖಂಡಿಸದಿದ್ದರೆ ಅಲ್ಲಿ ನಡೆಯುತ್ತಿರುವುದನ್ನೂ ಖಂಡಿಸಬಾರದು ಎನ್ನುವ ಫತ್ವಾದ ಧ್ವನಿ ಕೇಳಿಸುತ್ತದೆ.


ನನಗೆ ಈಗ ೫೬ ವರ್ಷಗಳಾದವು. ತೀರಾ ಕೆಲವು  ಕಿರಿಕಿರಿ ಅನಿಸಿದ ಸಂಗತಿಗಳನ್ನು ಬಿಟ್ಟರೆ ಉಳಿದಂತೆ ನೀವು ಹೇಳುವ ಹಾಗೆ ಧಾರ್ಮಿಕ ಅಸಹಿಷ್ಣುತೆಯಾಗಲೀ, ಅಲ್ಪಸಂಖ್ಯಾತ ಕೀಳರಿಮೆಯನ್ನಾಗಲೀ ಸಾಮಾಜಿಕ, ಔದ್ಯೋಗಿಕ, ಸಾಂಪತ್ತಿಕ ತಾರತಮ್ಯವನ್ನಾಗಲೀ ನಾನು ಅನುಭವಿಸಿಲ್ಲ. ಬಹುಶ: ಇದು ನಾನು ಕನ್ನಡ ಬರಹಗಾರನಾಗಿರುವುದರಿಂದ ಆಗಿರಬಹುದು. ಆಕಾಶವಾಣಿಯ ಉದ್ಯೋಗಿಯಾಗಿರುವುದರಿಂದ ಆಗಿರಬಹುದು ಎಂದು ಅಂದುಕೊಂಡು ನನ್ನ ಸುತ್ತಮುತ್ತ ನೋಡಿದರೆ ಅಲ್ಲೂ ಹಾಗೇನೂ ಕಾಣಿಸುತ್ತಿಲ್ಲ. 


ನಮ್ಮ ಉಮ್ಮನಿಗೆ ನಾವು ಎಂಟು ಜನ ಮಕ್ಕಳು. ಎಂಟು ಜನರ ಜೀವನ ಅವರು ಮುಸಲ್ಮಾನರಾಗಿರದಿದ್ದರೂ ಹೀಗೆಯೇ ಇರುತ್ತಿತ್ತು ಅನ್ನಿಸುತ್ತದೆ. ಅವರಲ್ಲಿ ಯಾರ ಬಳಿಯಲ್ಲಾದರೂ ನೀವು ಜಾತ್ಯತೀತ ಧರ್ಮ ನಿರಪೇಕ್ಷ ಭಾರತದಲ್ಲಿ ಇರಲು ಇಷ್ಟ ಪಡುತ್ತೀರೋ ಅಥವಾ ತಾಲಿಬಾನಿಗಳ ಊರಿಗೆ ಹೋಗುತ್ತೀರೋ ಎಂದು ಕೇಳಿದರೆ ಜೀವ ಹೋದರೂ ಪರವಾಗಿಲ್ಲ ನಮಗೆ ಇದೇ ಚಂದ ಎನ್ನುತ್ತಾರೆ. 

ಏಕೆಂದರೆ ನಾವೆಲ್ಲರೂ ಸಣ್ಣ ವಯಸ್ಸಿನಿಂದಲೇ ಮುಲ್ಲಾಗಳನ್ನು ಯಾಮಾರಿಸುತ್ತಾ ಬೆಳೆದವರು. ಅದೇನೋ ಗೊತ್ತಿಲ್ಲ ಸಣ್ಣ ವಯಸಿನಲ್ಲೇ ನನಗೆ ಈ ಮುಲ್ಲಾಗಳು ಸರಿ ಇಲ್ಲ ಎಂದು ಅನಿಸಿಬಿಟ್ಟಿದ್ದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ. ಒಂದು ಸಲ ಮುಲ್ಲಾಗಳು ಸರಿ ಇಲ್ಲ ಅನಿಸಿಬಿಟ್ಟರೆ ಆಮೇಲೆ ಜೀವನ ಸುರಬಿಲವೂ ಸುಂದರವೂ ಆಗಿರುತ್ತದೆ ಅನ್ನುವುದಕ್ಕೆ ನಾನೇ ಉದಾಹರಣೆ. 

(ಮುಲ್ಲಾಗಳು ಅಂದರೆ ನಮ್ಮ ಪಾಪದ ಉಸ್ತಾದರಾಗಲೀ, ಮೊಯಿಲಿಯಾರರಾಗಲೀ ಮುಕ್ರಿಗಳಾಗಲೀ ಅಲ್ಲ!)


ಇದು ನನ್ನ ಉದಾಹರಣೆ ಮಾತ್ರವಲ್ಲ. ಹಿಂದೂ ಧರ್ಮದಲ್ಲಿ ಹುಟ್ಟಿರುವ ನನ್ನ ಒಬ್ಬ ಬಾವಾಜಿಯೂ, ಒಬ್ಬಳು ನಾದಿನಿಯೂ, ಕಿರಿಸ್ತಾನ ಧರ್ಮದಲ್ಲಿ ಹುಟ್ಟಿರುವ ನನ್ನ ಮಡದಿಯೂ, ಯಾವುದೇ ಧರ್ಮವಿಲ್ಲದೆ ಬದುಕುತ್ತಿರುವ ನಮ್ಮ ಮಕ್ಕಳೂ ಹಾಗೂ ಬೇರೆ ಬೇರೆ ಜಾತಿ ಉಪಜಾತಿ ಗೋತ್ರಗಳಲ್ಲಿ ಹುಟ್ಟಿರುವ ನನ್ನ ಅಸಂಖ್ಯಾತ ಗೆಳೆಯ ಗೆಳತಿಯರೂ ಸುಂದರವೂ ಸುರಬಿಲವೂ ಆದ ಜೀವನ ನಡೆಸುತ್ತಿದ್ದಾರೆ. 

ಯಾಕೆಂದರೆ ಅವರೆಲ್ಲರೂ ಅವರವರ ಜಾತಿ ಮತ ಧರ್ಮಗಳ ಮುಲ್ಲಾಗಳನ್ನು ಹೊಂಡಕ್ಕೆ ಬಿಸಾಕಿ ಹೊರಗೆ ಬಂದಿದ್ದಾರೆ  ಹಾಗಾಗಿ  ಭಾರತದ ಎಲ್ಲ ದೇವರುಗಳನ್ನೂ ಎಲ್ಲ ಧರ್ಮಗಳನ್ನೂ ಎಲ್ಲ ಭೂತ ಪಿಶಾಚಿ ಯಕ್ಷ ಗಂಧರ್ವರನ್ನೂ ಏಕಕಾಲಕ್ಕೆ  ಆನಂದಿಸಬಲ್ಲವರಾಗಿದ್ದಾರೆ. 

ಹಾಗಾಗಿ ನೀವು ಮುಸಲ್ಮಾನನಾಗಿರಲಿ, ಬ್ರಾಹ್ಮಣನಾಗಿರಲಿ, ಬ್ಯಾರಿಯಾಗಿರಲಿ, ಬಾಯಮ್ಮನಾಗಿರಲಿ  ಮೊದಲಿಗೆ ನಿಮ್ಮೊಳಗಿರುವ ಮುಲ್ಲಾನನ್ನೂ, ತಾಲಿಬಾನನ್ನೂ ಎತ್ತಿ ಹೊರಹಾಕಬೇಕಾಗುತ್ತದೆ. 

ಇದು ತುಂಬ ಸರಳ ಮತ್ತು ಸ್ಪಷ್ಟ. ಇದರ ಕುರಿತು ನಿಲುವು ವ್ಯಕ್ತಪಡಿಸುವಾಗ ನೀವು ಖುರಾನಿನ ಮೊರೆಯನ್ನಾಗಲೀ, ಭಗವದ್ಗೀತೆಯ ಮೊರೆಯನ್ನಾಗಲೀ ಕುಕ್ಕುಟ ಪಂಚಾಂಗವನ್ನಾಗಲೀ ನೋಡಬೇಕಾಗಿಲ್ಲ. 

 

ಈ ಬರಹದ ಜೊತೆಗೆ ಕಡಲಲ್ಲಿ ಆಡುತ್ತಿರುವ ಲಕ್ಷದ್ವೀಪದ ತಂದೆ ಮತ್ತು ಮಕ್ಕಳ ಫೋಟೋಗಳನ್ನು ಹಾಕಿದ್ದೇನೆ. ಬಹುಶ: ತಾಲಿಬಾನಿಗಳ ಆಗಮನಕ್ಕೆ ಮೊದಲು ಇರಾನಿನಲ್ಲೂ, ಇರಾಕಿನಲ್ಲೂ, ಸಿರಿಯಾದಲ್ಲೂ, ಅಫಘಾನಿಸ್ತಾನದಲ್ಲೂ, ಆಫ್ರಿಕಾ ಖಂಡದ ಮುಸ್ಲಿಂ ದೇಶಗಳಲ್ಲೂ ಟರ್ಕಿಯಲ್ಲೂ ಟ್ಯುನೀಷಿಯಾದಲ್ಲೂ  ಮನುಷ್ಯರ ಮುಖದಲ್ಲಿ ಇದೇ  ನಗುವಿತ್ತು. ಅವರ ನಡಿಗೆಯಲ್ಲಿ ಲಾಸ್ಯವಿತ್ತು. ಆಯಾ ದೇಶಗಳ ತಾಲಿಬಾನ್ ತುಂಡುಗಳು ಆ ನಗುವನ್ನೂ ಲಾಸ್ಯವನ್ನೂ ನುಂಗಿ ನೀರು ಕುಡಿದು ಈಗ ದೆವ್ವಗಳ ಹಾಗೆ ಒಂದು ಕೈಯಲ್ಲಿ ಬಂದೂಕನ್ನೂ ಇನ್ನೊಂದು  ಕೈಯಲ್ಲಿ ಲ್ಯಾಪ್ ಟಾಪನ್ನೂ ಹಿಡಿದುಕೊಂಡು ತಿರುಗುತ್ತಿದ್ದಾರೆ. 


ನಾನು ಲಕ್ಷದ್ವೀಪದಲ್ಲಿ ಎರಡು ವರ್ಷಗಳಿಂದ ಬದುಕುತ್ತಿದ್ದೇನೆ. ಇಲ್ಲಿನ ಜನ ಇಲ್ಲಿಯವರೆಗೆ ವಹಾಬಿಗಳನ್ನೂ ಸಲಫಿಗಳನ್ನೂ ತಾಲಿಬಾನ್ ಮನಸ್ಥಿತಿಯನ್ನೂ ಒಳಗೆ ಬಿಟ್ಟುಕೊಂಡಿಲ್ಲ. ಹಾಗಾಗಿ ಇನ್ನೂ ಇವರ ಮುಖದಲ್ಲಿ ನಗುವಿದೆ. ನಡಿಗೆಯಲ್ಲಿ ಲಾಸ್ಯವಿದೆ. ಆದರೆ ಕಡಲ ಆಚೆಗಿನ ಎರಡೂ ಕಡೆಯ ತಾಲಿಬಾನಿಗಳು ಮತ್ತು  ಕೂಗುಮಾರಿ ಚಾನೆಲ್ ಗಳು ಮತ್ತು ಪ್ಯಾನೆಲ್ ಗಳು ಈ ನಗುವನ್ನು, ಲಾಸ್ಯವನ್ನು ಕಂಗೆಡಿಸಲುತೊಡಗಿದೆ. ಲಕ್ಷದ್ವೀಪದ ಕುರಿತು ಏನೂ ಗೊತ್ತಿಲ್ಲದ ಕೇವಲ ಟಿವಿ ಚಾನಲ್ ಗಳನ್ನು ನೋಡಿ ಇಲ್ಲಿ ಏನೋ ಆಗುತ್ತಿದೆ ಎಂದು ಕೂಗಾಡಿದ ಚಾನಲ್ ಗಳು ಈಗ ಅಫಘಾನಿಸ್ತಾನದ ಕಡೆ ಮುಖ ಮಾಡಿದೆ. ಆದರೆ ಆ ಚಾನೆಲ್ ಚರ್ಚೆಯ ಮೂಲಕ ಅವರು ಬಿತ್ತಿದ ವಿಷಬೀಜಗಳು ಇಲ್ಲಿ ನಿಧಾನಕ್ಕೆ  ಬೆಳೆಯತೊಡಗಿವೆ.


ಕೊನೆಗೆ ಒಂದು ಮಾತು: 

ನನ್ನ ೫೬ ವರ್ಷದ ಕೊನೆಯ ಎರಡು ವರ್ಷಗಳನ್ನು ನಾನು ಇಲ್ಲಿ ಕಳೆದೆ. ಸ್ವರ್ಗಕ್ಕಿಂತಲೂ ಅತಿಶಯವಾದ ಸೌಂದರ್ಯದ ದ್ವೀಪಗಳಿವು. ಜನರೂ ಅಷ್ಟೇ ತುಂಬಾ ಒಳ್ಳೆಯವರು. 

ಆದರೆ ಜೀವನ ಅಂತ ಕೇಳಿದರೆ ಸ್ವಲ್ಪ ಬೋರು. 

ಏಕೆಂದರೆ ಒಂದೇ ದೇವರು, ಒಂದೇ ಧರ್ಮ, ಒಂದೇ ಭಾಷೆ, ಒಂದೇ ಆಹಾರ, ಒಂದೇ ಆಚಾರ. ಅದೇ ಅಲ್ಲಾಗಿದ್ದರೆ ಎಷ್ಟೊಂದು ದೇವರುಗಳು ಎಷ್ಟೊಂದು ದೇವಾಲಯಗಳು, ಭೂತಗಳು, ಕೋಲಗಳು, ಕಲ್ಲುಗಳು, ಮಸೀದಿಗಳು, ನೇರ್ಚೆಗಳು, ನೇಮಗಳು, ಭಾಷೆಗಳು, ಮಾತುಗಳು, ಅವ್ಯಾಚ್ಯ ಪದಗಳಲ್ಲೂ ಎಷ್ಟೊಂದು ಸಂಗೀತ.


ಮೊಲೆಯಿಂದ ಬಾಯಿ ತೆಗೆಯುವ ಮೊದಲೇ ಹೆಣ್ಣು ಕಂದಮ್ಮಗಳನ್ನು ಪರದೆಯೊಳಕ್ಕೆ ತೂರಬಯಸುವ ತಾಲಿಬಾನಿಗಳು ಮತ್ತು ಎಷ್ಟೆಲ್ಲ ಕ್ರೌರ್ಯಗಳ ನಡುವೆಯೂ ಅಮೋಘವಾಗಿರುವ ಭರತಭೂಮಿ!


ತಾಲಿಬಾನಿಗಳನ್ನು ಖಂಡಿಸುವಾಗ  ಭಾರತದ ಕೆಡುಕುಗಳ ಉದಾಹರಣೆಗಳ ಬುರುಕಾದೊಳಕ್ಕೆ ನಿಮ್ಮ ಮೆದುಳನ್ನು ನೀವು ಅಡಗಿಸಿಕೊಳ್ಳಬಯಸುವುದಾದರೆ  ನಿಮ್ಮ ಮೆದುಳೊಳಗೆ ಈಗಾಗಲೇ ತಾಲಿಬಾನಿತನ ಹೊಕ್ಕು ಆಗಿದೆ ಅಂತ ಅರ್ಥ.


ಕರಾವಳಿಯ ಮುಸಲ್ಮಾನ ಕನ್ನಡ ಪ್ರಗತಿಪರರು ಇನ್ನೂ ಮಿದುಳೊಳಕ್ಕೆ ತಾಲಿಬಾನನ್ನು ಬಿಟ್ಟುಕೊಂಡಿರಲಾರರು ಎನ್ನುವುದು ನನ್ನ ಸಣ್ಣ ಆಶೆ.